ಅಧಿಕಸಿಲಿಕಾಂಶಶಿಲೆಗಳು

66% ಭಾಗ ಅಥವಾ ಇನ್ನೂ ಹೆಚ್ಚು ಭಾಗ ಸಿಲಿಕವನ್ನು ಒಳಗೊಂಡಿರುವ ಮತ್ತು ಕ್ವಾಟ್ರ್ಸ್, ಆಲ್‍ಕಲೈನ್‍ಫೆಲ್ಡ್‍ಸ್ಟಾರ್ ಮತ್ತು ಮಸ್ಕೋವೈಟ್ ಮುಂತಾದ ತಿಳಿಬಣ್ಣದ ಸಿಲಿಕೇಟುಗಳನ್ನು ಪ್ರಧಾನವಾಗಿ ಹೊಂದಿರುವ ಅಗ್ನಿಶಿಲೆಗಳೇ ಆ್ಯಸಿಡ್ ಅಥವಾ ಅಧಿಕಸಿಲಿಕಾಂಶ ಶಿಲೆಗಳು.
	
ಈ ವರ್ಗದ ಮುಖ್ಯ ಶಿಲೆಗಳು: 1. ಗ್ರಾನೈಟ್, ಗ್ರಾನೈಟ್‍ಪಾರ್‍ಫಿರಿ, ರ್ಹಯೊಲೈಟ್ ಮತ್ತು ರ್ಹಯೊಲೈಟ್‍ಪಾರ್‍ಫಿರಿ; 2. ಅಡಮಲ್ಲೈಟ್ ಕ್ವಾಟ್ರ್ಸ್, ಮಾನ್‍ಜೊನೈಟ್‍ಪಾರ್‍ಫಿರಿ, ಕ್ವಾಟ್ರ್ಸ್‍ಟೋನಲೈಟ್; 3. ಗ್ರಾನೊಡಯೊರೈಟ್, ಗ್ರಾನೊಡಯೊರೈಟ್‍ಪಾರ್‍ಫಿರಿ, ಡೇಸೈಟ್ ಮತ್ತು ಡೇಸೈಟ್‍ಪಾರ್‍ಫಿರಿ.
	
ಮೊದಲನೆಯ ಗುಂಪಿನಲ್ಲಿರುವ ಮುಖ್ಯ ಖನಿಜಗಳಿವು. ಕ್ವಾಟ್ರ್ಸ್, 10% ಕ್ಕೂ ಹೆಚ್ಚು ಭಾಗ ಪೊಟಾಷ್‍ಫೆಲ್ಡ್‍ಸ್ಟಾರ್. ಇವುಗಳ ಜೊತೆಗೆ ಇರುವ ಉಪಖನಿಜಗಳಲ್ಲಿ ಪ್ರಧಾನವಾದವು ಇವು-ಬಯೊಟೈಟ್, ಹಾರನ್‍ಬ್ಲೆಂಡ್, ಪೈರಾಕ್ಸೀನ್ ಮತ್ತು ಮಸ್ಕೋವೈಟ್. ಈ ಶಿಲೆಗಳು ಗ್ರಾನಿಟಿಕ್, ಫೆನೆರಿಕ್, ಪಾರ್‍ಫಿರಿಟಿಕ್ ಮತ್ತು ಅಫೆನಿಟಿಕ್ ಹೆಣಿಗೆಗಳನ್ನು ತೋರುತ್ತವೆ. ಈ ಗುಂಪಿನ ಶಿಲೆಗಳು ಅಧಿಕವಾಗಿ ಬ್ಯಾಥೊಲಿತ್, ಸ್ಟಾಕ್, ಡೈಕ್ ಮತ್ತು ಸಿಲ್ಲುಗಳ ರೂಪದಲ್ಲಿವೆ. ರ್ಹಯೊಲೈಟ್ ಬಹುಮಟ್ಟಿಗೆ ಲಾವಾಪ್ರಸ್ತರಗಳಂತೆಯೂ ಡೈಕುಗಳಂತೆಯೂ ಕಂಡುಬಂದಿದೆ.
	
ಎರಡನೆಯ ಗುಂಪು ಫೆನೆರಿಕ್, ಪಾರ್‍ಫಿರಿಟಿಕ್ ಮತ್ತು ಅಫೆನಿಟಿಕ್ ಹೆಣಿಗೆಗಳನ್ನು ತೋರಿಸುತ್ತದೆ. ಈ ಶಿಲೆಗಳ ಮುಖ್ಯ ಖನಿಜಗಳು. 10%ಕ್ಕೂ ಹೆಚ್ಚು ಕ್ವಾಟ್ರ್ಸ್, ಪೊಟಾಷ್ ಫೆಲ್ಡ್‍ಸ್ಟಾರ್ ಇವುಗಳ ಜೊತೆಗೆ ಹೊಂದಿಕೊಂಡಂತೆ ಪ್ರಧಾನವಾಗಿ ಹಾರನ್‍ಬ್ಲೆಂಡ್, ಬಯೊಟೈಟ್ ಮತ್ತು ಪೈರಾಕ್ಸೀನ್. ಇವು ಅಧಿಕವಾಗಿ ಬ್ಯಾಥೊಲಿತ್, ಸ್ಟಾಕ್, ಡೈಕ್ ಮತ್ತು ಸಿಲ್ಲುಗಳ ರೂಪದಲ್ಲಿವೆ.
	
ಮೂರನೆಯ ಗುಂಪಿನಲ್ಲಿ ಕ್ವಾಟ್ರ್ಸ್ ಮತ್ತು ಪೊಟಾಷ್‍ಫೆಲ್ಡ್‍ಸ್ಟಾರ್‍ಗಳು ಪ್ರಧಾನ ಖನಿಜಗಳಾಗಿವೆ; ಇವುಗಳ ಜೊತೆಗಿರುವ ಇತರ ಖನಿಜಗಳೆಂದರೆ ಹಾರನ್‍ಬ್ಲೆಂಡ್ ಮತ್ತು ಬಯೊಟೈಟ್. ಇವುಗಳ ಹೆಣಿಗೆ ಮತ್ತು ಹೊರ ಆಕಾರ ಮೊದಲೆರಡು ಗುಂಪುಗಳಂತೆಯೆ ಇವೆ.
	
ಅಧಿಕಸಿಲಿಕಾಂಶಶಿಲೆಗಳು ಅನೇಕ ಪ್ರದೇಶಗಳಲ್ಲಿ ಕಂಡುಬಂದಿವೆ. ಸಾಮಾನ್ಯವಾಗಿ ಇವುಗಳ ವ್ಯಾಪ್ತಿ ಹೆಚ್ಚು; ಮೈಸೂರಿನ ಅಧಿಕಸಿಲಿಕಾಂಶಶಿಲೆಗಳಲ್ಲಿ ನೈಸುಗಳು, ಕ್ಲೋಸ್‍ಪೇಟೆ ಗ್ರಾನೈಟುಗಳು, ಚಾರ್ನಕೈಟ್‍ಗಳು, ಪಾರ್‍ಫಿರಿಗಳು, ಫೆಲ್‍ಸೈಟುಗಳು ಸೇರಿವೆ. ಇವುಗಳಲ್ಲಿ ಬಹುಭಾಗ ಧಾರವಾಡಗುಂಪಿನ ಇತರ ಹಳೆಯ ಶಿಲೆಗಳನ್ನು ಭೇದಿಸಿಕೊಂಡು ಬಂದಿವೆ. ತಮ್ಮ ಖನಿಜಸಂಯೋಜನೆ, ರಚನಾವಿನ್ಯಾಸ ಮತ್ತು ರೂಪಾಂತರಗಳಿಂದ ಈ ಶಿಲೆಗಳು ಮೈಸೂರಿನ ಭೂಶಾಸ್ತ್ರಜ್ಞರ ಗಮನವನ್ನು ಸೆಳೆದಿವೆ. ಅಧಿಕಸಿಲಿಕಾಂಶ ಅಂತರ್ಭೇದಗಳು ಕೆಲವು ಖನಿಜನಿಕ್ಷೇಪಗಳಿಗೆ ಕಾರಣಭೂತವಾಗಿವೆ. ಕೋಲಾರದ ಚಿನ್ನದ ಗಣಿಪ್ರದೇಶದ ಛಾಂಪಿಯನ್ ನೈಸ್- ಇವುಗಳಲ್ಲೆಲ್ಲ ಪ್ರಾಚೀನವಾದುದೆಂದು ಭಾವಿಸಲಾಗಿದೆ. ಅಲ್ಲಿ ಸಿಗುವ ಚಿನ್ನಕ್ಕೆ ಇದೇ ಮೂಲವೆಂದೂ ಹೇಳಲಾಗಿದೆ. ಪೆನಿನ್ಸುಲಾರ್ ನೈಸ್ ಇಡೀ ದೇಶದುದ್ದಕ್ಕೂ ಹರಡಿದೆ. ಹೀಗೆಯೇ ಕ್ಲೋಸಪೇಟೆಗ್ರಾನೈಟ್ ರಾಮನಗರದಿಂದ ಬಳ್ಳಾರಿಯವರೆಗೆ ದಕ್ಷಿಣೋತ್ತರದ ಒಂದು ಪ್ರಮುಖಶಿಲಾಜಾಡಿಯಲ್ಲಿ ಬೆಟ್ಟಗುಡ್ಡಗಳೋಪಾದಿಯಲ್ಲಿ ಕಂಡುಬಂದಿದೆ. ಚಾರ್ನಕೈಟುಗಳನ್ನು ಕೊಡಗು, ಮೈಸೂರು ಜಿಲ್ಲೆಗಳ ದಕ್ಷಿಣ ಪ್ರಾಂತದಲ್ಲಿ ನೋಡಬಹುದು. ಇವುಗಳ ವ್ಯಾಪ್ತಿ ಬಲು ಕಡಿಮೆ. ಫೆಲ್ಸೈಟ್ ಮತ್ತು ಪಾರ್‍ಫಿರಿಗಳು ಬಹುಮಟ್ಟಿಗೆ ಡೈಕುಗಳೋಪಾದಿಯಲ್ಲಿ ದೇಶದ ಅನೇಕ ಕಡೆ ಹರಡಿವೆ. ಮೈಸೂರು, ಶ್ರೀರಂಗಪಟ್ಟಣ ಮತ್ತು ತುರುವೇಕೆರೆ- ಈ ಊರುಗಳ ಸುತ್ತಮುತ್ತಲಿನ ಫೆಲ್ಸೈಟ್ ಮತ್ತು ಪಾರ್‍ಫಿರಿಗಳು ಉತ್ತಮ ಅಲಂಕಾರ ಶಿಲೆಗಳೆಂದು ಜಗತ್ಪ್ರಸಿದ್ಧವಾಗಿವೆ.      
(ಎಸ್.ಬಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ